ಮೋಹನ ರಾಕೇಶ್

1925-72. ಪ್ರಸಿದ್ಧ ಹಿಂದೀ ಲೇಖಕರು. ಹುಟ್ಟಿದ್ದು ಪಂಜಾಬ್ ರಾಜ್ಯದ ಅಮೃತಸರದಲ್ಲಿ. ಅಲ್ಲಿಯ ಹಿಂದೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ ಇವರು ಅನಂತರ ಲಾಹೋರಿನ ಒರಿಯಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ ಶಾಸ್ತ್ರೀ ಪದವಿಯನ್ನೂ ಹಿಂದೀ, ಸಂಸ್ಕøತಗಳಲ್ಲಿ ಎಂ.ಎ. ಪದವಿಗಳನ್ನೂ ಗಳಿಸಿದರು. ಕೆಲಕಾಲ ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಅಲ್ಲದೇ ಜಲಂಧರ್‍ನಲ್ಲಿರುವ ಡಿ.ಎ.ವಿ.ಕಾಲೇಜಿನಲ್ಲಿ ಹಿಂದೀ ವಿಭಾಗದ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದರು. ಹನ್ನೆರಡು ವರ್ಷ ಪರ್ಯಂತ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಮುಂದೆ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಜಲಂಧರ್, ದೆಹಲಿ, ಮುಂಬಯಿ ನಗರಗಳಲ್ಲಿ ಪತ್ರಿಕೋದ್ಯಮಿಯಾಗಿಯೂ ಸೇವೆ ಸಲ್ಲಿಸಿದರು. 1971-72ರಲ್ಲಿ ಇವರಿಗೆ ದಿ ಡ್ರಮ್ಯಾಟಿಕ್ ವರ್ಡ್ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಲು ನೆಹರೂ ಫೆಲೋಶಿಪ್ ನೀಡಲಾಗಿತ್ತು. 

		ರಾಕೇಶರು ಕವನಗಳ ಮೂಲಕ ಬರೆಹದ ಬದುಕನ್ನು ಪ್ರವೇಶಿಸಿದರೂ ನಾಟಕ ಕ್ಷೇತ್ರಕ್ಕೆ ಇವರ ಕೊಡುಗೆ ವಿಶಿಷ್ಟವಾದುದು. 1947ರಲ್ಲಿ ಆರಂಭವಾದ `ನಯಿ ಕಹಾನಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಇವರು ಖ್ಯಾತ ಕತೆಗಾರರೂ ಹೌದು. ಇಂಸಾನ್ ಕೇ ಖಂಡಹರ್, ನಯೇ ಬಾದಲ್, ಜಾನವರ್ ಔರ್ ಜಾನವರ್, ರೋಯೇಂ ರೇಶೇ ಇತ್ಯಾದಿ ಗ್ರಂಥಗಳಲ್ಲಿ ಇವರ ಕತೆಗಳು ಸಂಗ್ರಹಗೊಂಡಿವೆ. ಇವರು ಕಾದಂಬರಿ ಕ್ಷೇತ್ರದಲ್ಲಿಯೂ ಯಶಸ್ಸುಗಳಿಸಿದ್ದಾರೆ. ಅಂಧೇರೇ ಬಂದ್ ತಮರೇ; ನೀಲೀ ರೋಶನೀ ಕೀ ಬಾಹೇಂ; ಕಾಂತತಾ ಹುವಾ ದರಿಯಾ; ನ ಆನೆವಾಲಾ ಕಲ್ - ಇವು ಇವರ ಕಾದಂಬರಿಗಳು. ಪರಿವೇಶ ಎಂಬ ಗ್ರಂಥದಲ್ಲಿ ಇವರ ನಿಬಂಧಗಳನ್ನು ಸಂಗ್ರಹಿಸಲಾಗಿದೆ. ಆಖಿರೀ ಚಟ್ಟಾನ್ ತಕ್ ಎಂಬುದು ಪ್ರವಾಸ ಸಾಹಿತ್ಯಕ್ಕೆ ಮೀಸಲಾದ ಕೃತಿ. 

		ನಾಟಕ ಕ್ಷೇತ್ರದಲ್ಲಿ ಮೋಹನ ರಾಕೇಶರ ಕೊಡುಗೆ ಉಲ್ಲೇಖನೀಯ. ಆಷಾಢ ಕಾ ಏಕ್ ದಿನ್; ಲಹರೋಂ ಕೇ ರಾಜಹಂಸ್ ಮತ್ತು ಅದೇ ಅಧೂರೇ-ಇವು ಇವರ ಪ್ರಾತಿನಿಧಿಕ ನಾಟಕಗಳು. 1958ರಲ್ಲಿ ಪ್ರಕಾಶಗೊಂಡ ಅಷಾಧ ಕಾ ಏಕ್ ದಿನ್ ಉತ್ಕøಷ್ಟ ಕೃತಿ. ಅಂದಿನಿಂದ ಈ ನಾಟಕ ಪ್ರದರ್ಶಿತವಾಗುತ್ತಲೇ ಇದೆ. ಭಾರತದ ಇತರ ಭಾಷೆಗಳಿಗೂ ಈ ಕೃತಿ ಅನುವಾದಗೊಂಡು ಪ್ರಕಟವಾಗಿದೆ. ಇದು ಮಹಾ ಕವಿ ಕಾಳಿದಾಸನ ಸಮಗ್ರ ಜೀವನವನ್ನು ನಾಟಕೀಯ ಸ್ಥಿತಿಯಲ್ಲಿ ರಚನಾತ್ಮಕ ದೃಷ್ಟಿಯಿಂದ ಚಿತ್ರಿಸುವ ಕೃತಿ. ಇವರ ಮೂರು ನಾಟಕಗಳನ್ನೂ ಸಿದ್ಧಲಿಂಗಪಟ್ಟಣ ಶೆಟ್ಟಿ ಅವರು ಆಷಾಢದ ಒಂದು; ಅಲೆಗಳಲ್ಲಿ ರಾಜಹಂಸ; ಅಪೂರ್ಣರು ಎಂಬ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಆದೇ ಅಧೂರೇ ಚಲನ ಚಿತ್ರವಾಗಿದೆ.
(ವಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ